ಭೌತ್ಯ 
	ಒಬ್ಬ ಮನು. ಭೂತಿಮುನಿಯ ಮಗ. ಭೂತಿ ಅಲ್ಪ ಅಪರಾಧವನ್ನೂ ಸಹಿಸದಷ್ಟು ತೀವ್ರಕೋಷಿ. ಎಷ್ಟು ಮಾತ್ರಕ್ಕೂ ಶ್ರಮ ಸಹಿಸದವ. ಪಂಚಭೂತಗಳೂ ಸೂರ್ಯಚಂದ್ರರೂ ವಸಂತಾದಿ ಋತುಗಳೂ ಈತನ ಮನೋವೃತ್ತಿಯನ್ನು ಅನುಸರಿಸುತ್ತಿದ್ದುವು. ಸಕಲ ನದಿಗಳ ತೀರ್ಥಗಳೂ ಈತನ ಕಮಂಡಲುವಿನಲ್ಲಿ ನೆಲಸಿದ್ದವು. ಒಮ್ಮೆ ಭೂತಿಮನಿ ಸಂತಾನಾಪೇಕ್ಷೆಯಿಂದ ತಪಸ್ಸು ಮಾಡತೊಡಗಿದ. ಸೂರ್ಯ, ಚಂದ್ರ, ವಾಯು, ಪರ್ಜನ್ಯರು ಹೆದರಿ ಆತನಿಗೆ ಬಳಲಿಕೆಯಾಗದಂತೆ ನಡೆದುಕೊಂಡು, ಇಷ್ಟಾದರೂ ಹಸಿವು ನೀರಡಕೆಗಳನ್ನು ತಡೆಯಲಾಗದೆ ತಪ್ಪಸ್ಸಿನಿಂದ ಹಿಂದಿರುಗಿದ. ಒಮ್ಮೆ ಈತನ ತಮ್ಮ ಸುವರ್ಚಮುನಿ ಯಜ್ಞದೀಕ್ಷೆ ಕೈಕೊಂಡು ಈತನನ್ನು ಬರಹೇಳಿದ. ಭೂತಿ ತನಗೆ ಅತ್ಯಂತ ವಿಧೇಯನಾದ ಶಾಂತಿಯೆಂಬ ಶಿಷ್ಯನನ್ನು ಅಗ್ನಿಶುಶ್ರೂಷೆಗೆ ನಿಯಮಿಸಿ ಯಜ್ಞಕ್ಕೆ ಹೋದ. ಒಂದು ದಿನ ಶಾಂತಿ ಸಮಿತ್ತು, ಪುಷ್ಪ ಮೊದಲಾದವನ್ನು ತರಲು ಕಾಡಿಗೆ ಹೋಗಿ ಬರುವಷ್ಟರಲ್ಲಿ ಅಗ್ನಿ ನಂದಿಹೋಗಿತ್ತು. ಗುರುವಿನ ಕೋಪ ಅರಿತಿದ್ದ ಈ ಮುನಿ ಕಂಗೆಟ್ಟು ಅಗ್ನಿದೇವನನ್ನೇ ಮೊರೆಹೊಕ್ಕ. ಅಗ್ನಿಯನ್ನು ಹೊಗಳಿ ಆ ಪುತ್ರನಾದ ತನ್ನ ಗುರುವಿಗೆ ಸತ್ಸಂತಾನವಾಗುವಂತೆಯೂ ಅಗ್ನಿಕುಂಡದಲ್ಲಿ ಮರಳಿ ಪ್ರಜ್ವಲಿಸುವಂತೆಯೂ ವರ ಕೇಳಿ ಪಡೆದ. ಭೂತಿಮುನಿ ಹಿಂತಿರುಗಿ ಬಂದಾಗ ಶಿಷ್ಯನ ಮುಖದಲ್ಲಿ ಇದ್ದ ದಿವ್ಯತೇಜಸ್ಸನ್ನು ಕಂಡು ವಿಸ್ಮಿತನಾಗಿ ನಡೆದ ವೃತ್ತಾಂತವನ್ನೆಲ್ಲಾ ತಿಳಿದು ಶಿಷ್ಯನನ್ನು ಸಂತೋಷದಿಂದ ಬಿಗಿದಪ್ಪಿ ಸಕಲ ವೇದವೇದಾಂತ ರಹಸ್ಯಗಳನ್ನು ಆತನಿಗೆ ತಿಳಿಸಿದ. ಬಳಿಕ ಅಗ್ನಿದೇವನ ವರದಿಂದ ಭೂತಿಮುನಿ ಒಬ್ಬ ಪುತ್ರನನ್ನು ಪಡೆದ. ಕಾಲಾಂತರದಲ್ಲಿ ಈತ ಮನ್ವಂತರಾಧಿಪನಾದ.
(ಕೆ.ವೈ.ಎಸ್.; ಎಸ್.ಇ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ